ಭಾದ್ರಪದ 
ಚೈತ್ರ ಮೊದಲಾದ ಹನ್ನೆರಡು ಚಾಂದ್ರಮನ ತಿಂಗಳುಗಳಲ್ಲಿ ಆರನೆಯದು. ಈ ತಿಂಗಳಿನ ಹುಣ್ಣಿಮೆಯಂದು ಪೂರ್ವಾಭಾದ್ರಪದ ಅಥವಾ ಉತ್ತರಾಭಾದ್ರಪದ ನಕ್ಷತ್ರ ಬರುವುದರಿಂದ ಈ ಹೆಸರು. ಸೂರ್ಯ ಸಿಂಹರಾಶಿಯಲ್ಲಿ ಇರುವಾಗ ಶುಕ್ಲ ಪ್ರಥಮಾ ತಿಥಿಯಿಂದ ಈ ತಿಂಗಳು ಪ್ರಾರಂಭವಾಗಿ ಕನ್ಯಾರಾಶಿಯಲ್ಲಿ ಸೂರ್ಯನಿರುವಾಗ ಅಮಾವಾಸ್ಯೆಯೊಡನೆ ಮುಗಿಯುತ್ತದೆ.
ಹಲವು ವರ್ಷಗಳಿಗೊಮ್ಮೆ ಸೂರ್ಯ ಸಿಂಹರಾಶಿಯಲ್ಲಿ ಇರುವಾಗಲೇ ಮಾಸ ಮಧ್ಯಮದಲ್ಲಿ ಸೂರ್ಯಸಂಕ್ರಮಣ ಬರದೆ ಚಾಂದ್ರಮಾನ ಸಂಭವಿಸುತ್ತದೆ. ಇದಕ್ಕೆ ಅಧಿಕ ಭಾದ್ರಪದಮಾಸ ಎಂದು ಹೆಸರು. ಚೈತ್ರಾದಿ ಮಾಸಗಣನೆಯಲ್ಲಿ ಈ ಅಧಿಕಮಾಸ ಆರನೆಯದು, ಏಳನೆಯದು ನಿಜಭಾದ್ರಪದ. ಭಾದ್ರಪದ ಮಾಸವನ್ನು ನಭಾಸ್ಯ, ಪ್ರೌಷ್ಠಪದ, ಭಾದ್ರ ಎಂಬ ಹೆಸರಿನಿಂದ ಕರೆಯುತ್ತಾರೆ. ವೇದದಲ್ಲಿ ಈ ತಿಂಗಳಿಗೆ ಇಷಃ ಎಂಬ ನಾಮಾಂತರವಿದೆ.

ಅಧಿಕ ಭಾದ್ರಪದ ಮಾಸ ಮಲಮಾಸವಾದುದರಿಂದ ಇದರಲ್ಲಿ ನಿತ್ಯಕರ್ಮಗಳನ್ನು ಬಿಟ್ಟು ಯಾವ ವ್ರತಾಚರಣೆಯೂ ಇರುವುದಿಲ್ಲ. ಭಾದ್ರಪದ ಮಾಸಾಂತ್ಯಕ್ಕೆ ವರ್ಷಋತು ಮುಗಿಯುತ್ತದೆ.

ಗುರೂದಯದಿಂದ ವರ್ಷಗಣನೆ ಮಾಡುವ ಕ್ರಮದಂತೆ ಗುರು ಶತಭಿಷಾ, ಪೂರ್ವಭಾದ್ರಪದ, ಉತ್ತರಾಭಾದ್ರಪದ ನಕ್ಷತ್ರಗಳಲ್ಲಿ ಸಂಚರಿಸುವಾಗ ಉದಿತನಾದರೆ ಆ ವರ್ಷವನ್ನು ಭಾದ್ರಪದ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ವರ್ಷದಲ್ಲಿ ಪಾಷಂಡಿಗಳಿಗೆ ತೊಂದರೆ, ಮುಂಗಾರು ಫಸಲಿಗೆ ಅನುಕೂಲ ಭಾದ್ರಪದ ತಿಂಗಳಿನಲ್ಲಿ ಗ್ರ್ರಹಣ ಸಂಭವಿಸಿದರೆ ಕಳಿಂಗ, ವಂಗ ಮಾಗಧ, ಸೌರಾಷ್ಟ್ರ ಮತ್ತು ಮ್ಲೇಚ್ಛ ದೇಶಗಳಿಗೆ ತೊಂದರೆ. ಉಳಿದ ದೇಶಗಳಲ್ಲಿ ಸುಭಿಕ್ಷ. ಹೆಂಗಸರ ಗರ್ಭಕ್ಕೆ ತೊಂದರೆ ಎಂಬುದಾಗಿ ವರ್ಷಭವಿಷ್ಯ ಹೇಳುತ್ತದೆ.

ನಾಲ್ಕು ಮುಖ, ಎಂಟು ಭುಜಗಳಿಂದ ಕೂಡಿ ಶ್ರೇಷ್ಠ ಹಂಸಾರೂಢನಾಗಿ ಬಿಳುಪು ವರ್ಣದಿಂದ ಕೂಡಿದ ಸ್ವರೂಪವುಳ್ಳವನಾಗಿರುತ್ತಾನೆಂದು ಭಾದ್ರಪದ ಮಾಸದ ಸ್ವರೂಪವನ್ನು ಶ್ರೀತತ್ತ್ವನಿಧಿಯಲ್ಲಿ ವರ್ಣಿಸಲಾಗಿದೆ. ಈ ತಿಂಗಳಿನಲ್ಲಿ ಅಭಿಮಾನಿ ದೇವತೆಯದ ಹೃಷಿಕೇಶನ ಪ್ರೀತಿಯನ್ನು ಪಡೆಯುವುದಕ್ಕಾಗಿ ಬೆಲ್ಲದ ಅನ್ನ ಪಾಯಸ ಕನ್ನಡಿ ಇವನ್ನು ದಾನಮಾಡುತ್ತಾರೆ ಈ ಮಾಸದಲ್ಲಿ ಹುಟ್ಟಿದವನ ಶರೀರ ತೆಳ್ಳಗಿರುತ್ತದೆ. ದಾನಮಾಡುವ ಉದಾರ ಸ್ವಭಾವಿರುತ್ತದೆ. ಮಡದಿ ಮಕ್ಕಳೊಡನೆ ಸೌಖ್ಯದಿಂದಿದ್ದು ಧೂರ್ತ ಎನಿಸಿಕೊಳ್ಳುತ್ತಾನೆ.

ಭಾದ್ರಪದ ತಿಂಗಳಿನ ಶುಕ್ಲಪಕ್ಷದ ತೃತೀಯಾ ತಿಥಿ ಉದಯಕಾಲದಲ್ಲಿ ಇರುವ ದಿವಸ ಸುವಾಸಿನಿಯರು ಸ್ವರ್ಣಗೌರಿವ್ರತವನ್ನು ಆಚರಿಸುತ್ತಾರೆ ಶುಕ್ಲ ಚತುರ್ಥೀ ತಿಥಿ ಮಧ್ಯಾಹ್ನ ಕಾಲದಲ್ಲಿರುವ ದಿವಸ ಗಣಪತಿ ವ್ರತವನ್ನು ಎಲ್ಲ ಕಡೆಗಳಲ್ಲೂ ಬಹಳ ವಿಜೃಂಭಣೆಯಿಂದ ನಡೆಸುತ್ತಾರೆ. ಅಂದು ಚೌತಿಯ ಚಂದ್ರನನ್ನು ನೋಡಿದರೆ ಅಪವಾದ ಬರುತ್ತದೆಂದು ವ್ರತಕಥೆ ಹೇಳುತ್ತದೆ.
ಶುಕ್ಲಪಂಚಮಿತಿಥಿ ಮಧ್ಯಾಹ್ನದಲ್ಲಿರುವ ದಿವಸ ಋಷಿಪಂಚಮಿ ವ್ರತಾನುಷ್ಠಾನ. ಈ ತಿಂಗಳಿನ ಶುಕ್ಲಪಕ್ಷದ ಅಷ್ಟಮೀ ತಿಥಿ ಪೂರ್ವಾಹ್ನದಲ್ಲಿರುವ ದಿವಸ ದೂರ್ವಾಷ್ಟಮೀ ಆಚರಣೆ. ಶುಕ್ಲದ್ವಾದಶೀ ತಿಥಿ ಮಧ್ಯಾಹ್ನ ಕಾಲದಲ್ಲಿರುವ ದಿವಸ ವಾಮನ ಜಯಂತಿ. ಈ ದಿವಸದಿಂದಲೆ ಕ್ಷೀರವ್ರತದ ಆರಂಭ. ಶುಕ್ಲ ಚತುರ್ದಶೀ ತಿಥಿ ಉದಯಕಾಲಕ್ಕೆ ಅನಂತಪದ್ಮನಾಭ ವ್ರತಾಚರಣೆ ಪೂರ್ಣಿಮಾ ತಿಥಿ ದೋಷಕಾಲದಲ್ಲಿರುವ ದಿವಸ ಉಮಾಮಹೇಶ್ವರ ವ್ರತಾಚರಣೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಹಸ್ತನಕ್ಷತ್ರ ಮಧ್ಯಾಹ್ನದಲ್ಲಿರುವ ದಿವಸ ಸಾಮವೇದಿಗಳಿಗೆ ಉಪಾಕರ್ಮದಿನ. ಭಾದ್ರಪದ ಶುಕ್ಲ ಪಕ್ಷದಲ್ಲಿ ವ್ರತ ಮತ್ತು ಹಬ್ಬಗಳನ್ನು ಆಚರಿಸುವುದರ ಮೂಲಕ ದೈವಕರ್ಮ ಅಧಿಕವಾಗಿ ನಡೆಯುತ್ತದೆ. ಈ ತಿಂಗಳಿನ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದೂ ಮಹಾಲಯ ಪಕ್ಷವೆಂದೂ ಕರೆಯುವುದು ರೂಢಿಯಲ್ಲಿದೆ. ಪಿತೃಗಳನ್ನು ಉದ್ದೇಶಿಸಿ ಮಾಡುವ ವೈದಿಕಕರ್ಮ ಈ ಪಕ್ಷದಲ್ಲಿ ಅಧಿಕ.

ಭಾದ್ರಪದ ಕೃಷ್ಣಪಕ್ಷದಲ್ಲಿ ಬರುವ ಭರಣಿ ನಕ್ಷತ್ರವನ್ನು ಮಹಾಭರಣಿ ಎಂದೂ ವ್ಯತೀಪಾತವನ್ನು ಮಹಾವ್ಯತೀಪಾತವೆಂದೂ ಅಷ್ಟಮೀತಿಥಿಯನ್ನು ಮಧ್ಯಾಷ್ಟಮಿ ಎಂದೂ ಚತುರ್ದಶೀ ತಿಥಿಯನ್ನು ಘಾತಚತುರ್ದಶೀ ಎಂದೂ ಅಮಾವಾಸ್ಯೆಯನ್ನು ಮಹಾಲಯಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ದಿವಸಗಳಲ್ಲಿ ತಿಲತರ್ಪಣ, ಶ್ರಾದ್ಧ, ಬ್ರಾಹ್ಮಣ ಭೋಜನ ವಿಶೇಷ. ಭಾದ್ರಪದ ಮಾಸದ ಕೃಷ್ಣಪಕ್ಷ ಶ್ರಾದ್ಧ ಕರ್ಮಕ್ಕಾಗಿಯೇ ಮೀಸಲಾದ ಪಕ್ಷವಾಗಿದೆ.
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ